ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್: ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಚಾಂಪಿಯನ್ ಪಟ್ಟ

ನವದೆಹಲಿ: ಚೊಚ್ಚಲ ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಹಿಳಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ ಪಂದ್ಯದಲ್ಲಿ ಉಗಾಂಡಾ ತಂಡವನ್ನು 35-15 ಅಂಕಗಳಿಂದ ಮಣಿಸಿದ ಭಾರತ, ಪುರುಷರ ತಂಡದ ಬಳಿಕ ಮಹಿಳಾ ವಿಭಾಗದಲ್ಲೂ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ. ಒಂಬತ್ತು ದಿನಗಳ ಟೂರ್ನಿಯಲ್ಲಿ ಎರಡೂ ತಂಡಗಳು ಅಜೇಯ ಅಭಿಯಾನ ನಡೆಸಿವೆ.

ಫೈನಲ್‌ನಲ್ಲಿ ಸಾಕ್ಷಿ 10 ರೈಡ್‌ಗಳಲ್ಲಿ ಒಂಬತ್ತು ಅಂಕ ಗಳಿಸಿ ಮಿಂಚಿದರು. ಅನು ಆರು ಹಾಗೂ ನಾಯಕಿ ನಿಧಿ ಶರ್ಮಾ ಐದು ರೈಡ್ ಪಾಯಿಂಟ್‌ಗಳ ಕೊಡುಗೆ ನೀಡಿದರು. ರಿತು ಮತ್ತು ಸುಮನ್ ತಲಾ ನಾಲ್ಕು ಟ್ಯಾಕಲ್ ಪಾಯಿಂಟ್ ಗಳಿಸಿದರು.

ಭಾರತ 20 ರೈಡ್ ಮತ್ತು 10 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿತು. ಪಂದ್ಯದಲ್ಲಿ ಉಗಾಂಡಾ ತಂಡವನ್ನು ಎರಡು ಬಾರಿ ಆಲೌಟ್ ಮಾಡಿದ ಭಾರತೀಯರು, ಮೊದಲಾರ್ಧದಲ್ಲೇ 22-7 ಅಂಕಗಳ ಮುನ್ನಡೆ ಸಾಧಿಸಿದ್ದರು. ಎರಡನೇ ಆಲೌಟ್ ಮೂಲಕ ಗೆಲುವನ್ನು ಖಚಿತಪಡಿಸಿಕೊಂಡರು.

ಟೂರ್ನಿಯಲ್ಲಿ ಆರು ಪಂದ್ಯಗಳಿಂದ ಒಟ್ಟು 52 ಅಂಕ ಗಳಿಸಿದ ಸಾಕ್ಷಿ, ತಂಡದ ಗೆಲುವಿಗೆ ಕೊಡುಗೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.