ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಕೈಗೊಂಡಿರುವ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು ₹350 ಕೋಟಿ ಸಾರ್ವಜನಿಕ ಹಣಕಾಸಿನ ಅಕ್ರಮ ನಡೆದಿರುವ ಸಾಧ್ಯತೆಯಿದೆ ಎಂದು ಆರೋಪಿಸಿರುವ ಸಿಟಿಜನ್ ರೈಟ್ಸ್ ಫೌಂಡೇಶನ್ (CRF), ಸ್ವತಂತ್ರ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಈ ಸಂಬಂಧ CRF ಅಧ್ಯಕ್ಷ ಕೆ.ಎ.ಪಾಲ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ಈ ಟೆಂಡರ್ ಪ್ರಕ್ರಿಯೆ ಕುರಿತ ಸಮಗ್ರ ಲೆಕ್ಕ ಪರಿಶೋಧನೆಯ ಅಗತ್ಯದ ಬಗ್ಗೆಯೂ ಅವರು CAG ಯ ಗಮನಸೆಳೆದಿದ್ದಾರೆ.
2026ರ ನವೆಂಬರ್ 12ರಂದು ಸಲ್ಲಿಸಿರುವ ಮನವಿಯಲ್ಲಿ, 2025ರ ಜುಲೈ 30ರಂದು ಪ್ರಕಟಿಸಲಾದ 33 ಪ್ಯಾಕೇಜ್ಗಳ ಟೆಂಡರ್ ಪ್ರಕ್ರಿಯೆ ಹಾಗೂ 2026ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಹೊರಡಿಸಲಾದ ನಂತರದ ಟೆಂಡರ್ಗಳನ್ನು ಪರಿಶೀಲಿಸುವಂತೆ ಕೋರಿದೆ.
ಟೆಂಡರ್ನ ಅಂದಾಜು ಮೊತ್ತಕ್ಕಿಂತ ಶೇ 14ರಷ್ಟು ಹೆಚ್ಚಿನ ದರದಲ್ಲಿ ಗುತ್ತಿಗೆ ನೀಡಲಾಗಿದೆ ಅಥವಾ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಸಾರ್ವಜನಿಕ ಬೊಕ್ಕಸಕ್ಕೆ ಸುಮಾರು ₹350 ಕೋಟಿ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆಯಿದೆ ಎಂಬುದು ಪ್ರತಿಷ್ಠಾನದ ಪ್ರಮುಖ ಆರೋಪ. ಹಣಕಾಸು ಇಲಾಖೆಯ ಆಕ್ಷೇಪಣೆಗಳು, ಸರ್ಕಾರ ನೇಮಿಸಿದ ಸಮಿತಿಗಳ ವರದಿಗಳು, ಟೆಂಡರ್ ತಿದ್ದುಪಡಿಗಳು ಹಾಗೂ ಅರ್ಹತಾ ಮಾನದಂಡಗಳ ಬದಲಾವಣೆಗಳ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಿದೆ.

BSWMLನ ಉಪ ಪ್ರಧಾನ ವ್ಯವಸ್ಥಾಪಕ-1 ಚಂದ್ರಶೇಖರ್, ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ರಾಜೇಶ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರ ಅಧಿಕೃತ ಜವಾಬ್ದಾರಿ, ಶಿಫಾರಸು, ಅನುಮೋದನೆ ಹಾಗೂ ನಿರ್ಧಾರಗಳನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು. ಗುತ್ತಿಗೆದಾರರು ಮತ್ತು ಬಿಡ್ದಾರರ ಪಾತ್ರವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಸೆಪ್ಟೆಂಬರ್ 22ರಿಂದ ಜಾರಿಯಲ್ಲಿದ್ದ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಸೆಪ್ಟೆಂಬರ್ 19, 23 ಮತ್ತು ಅಕ್ಟೋಬರ್ 8ರಂದು ಟೆಂಡರ್ ಅಧಿಸೂಚನೆ ಹೊರಡಿಸಿರುವುದು ಹಾಗೂ ಕೆಲವು ಪ್ಯಾಕೇಜ್ಗಳಿಗೆ ಕಾರ್ಯಾದೇಶ ನೀಡಿರುವುದರ ಕಾನೂನುಬದ್ಧತೆಯನ್ನು ಪರಿಶೀಲಿಸುವಂತೆಯೂ ಕೋರಿದೆ.
ಟೆಂಡರ್ ದಾಖಲೆಗಳು, ಹಣಕಾಸು ಬಿಡ್ಗಳು, ಸಮಿತಿ ವರದಿಗಳು, ಅನುಮೋದನೆಗಳು ಮತ್ತು ಡಿಜಿಟಲ್ ದಾಖಲೆಗಳನ್ನು ಸಂರಕ್ಷಿಸಬೇಕು. ಅಕ್ರಮಕ್ಕೆ ಪ್ರಾಥಮಿಕ ಸಾಕ್ಷ್ಯ ದೊರೆತರೆ ಪ್ರಕರಣವನ್ನು ತನಿಖಾ ಸಂಸ್ಥೆಗಳಿಗೆ ವಹಿಸಬೇಕು. ಕಾನೂನು ಉಲ್ಲಂಘನೆ ದೃಢಪಟ್ಟಲ್ಲಿ ಟೆಂಡರ್ ರದ್ದು, ಮಾರ್ಪಾಡು ಅಥವಾ ಮರು ಟೆಂಡರ್ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಪ್ರತಿಷ್ಠಾನ ಒತ್ತಾಯಿಸಿದೆ.
ಸಿಎಜಿಗೂ ಪ್ರತ್ಯೇಕ ದೂರು
BSWMLನ 33 ಪ್ಯಾಕೇಜ್ಗಳ ಟೆಂಡರ್ನಲ್ಲಿ ಹಣಕಾಸು ಅಕ್ರಮಗಳ ಸಾಧ್ಯತೆಯ ಕುರಿತು ಸಮಗ್ರ ಲೆಕ್ಕಪರಿಶೋಧನೆ ನಡೆಸುವಂತೆ CRF, ಸಿಎಜಿ ಮತ್ತು ಕರ್ನಾಟಕದ ಪ್ರಧಾನ ಮಹಾಲೇಖಪಾಲರಿಗೆ ಪ್ರತ್ಯೇಕ ಮನವಿ ಸಲ್ಲಿಸಿದೆ.
2025ರ ಜುಲೈ 30ರಂದು ಪ್ರಕಟವಾದ ಟೆಂಡರ್ನ ಸುಮಾರು ₹2,500 ಕೋಟಿ ಮೂಲ ಮೊತ್ತದ ಮೇಲೆ ₹350 ಕೋಟಿ ಪ್ರೀಮಿಯಂ ವಿಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ವಾಹನ ಬಾಡಿಗೆ, ಇಂಧನ, ನಿರ್ವಹಣೆ, ಕಾರ್ಮಿಕರ ವೇತನ, ಗುತ್ತಿಗೆದಾರರ ಅರ್ಹತೆ, ಪ್ಯಾಕೇಜ್ ಹಂಚಿಕೆ, GPS, RFID ಹಾಗೂ ಪಾವತಿ ದಾಖಲೆಗಳನ್ನು ಪರಿಶೀಲಿಸುವಂತೆ ಕೋರಿದೆ.
