ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕರಾವಳಿಯ ಅಂಜದೀವ್ ದ್ವೀಪದ ಸಮೀಪ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ವೊಂದು ಮುಳುಗಿದ ಘಟನೆ ನಡೆದಿದೆ. ಬೋಟ್‌ನಲ್ಲಿದ್ದ 24 ಮಂದಿ ಮೀನುಗಾರರನ್ನು ಸಕಾಲಿಕ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಳಂಬಾರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಪಾಯಕ್ಕೆ ಸಿಲುಕಿದ್ದು, ಬಳಿಕ ಸಂಪೂರ್ಣವಾಗಿ ಮುಳುಗಿದೆ ಎನ್ನಲಾಗಿದೆ.

ಬೋಟ್ ಅಪಾಯದಲ್ಲಿರುವುದನ್ನು ಸಮೀಪದಲ್ಲಿ ಸಂಚರಿಸುತ್ತಿದ್ದ ಐದಾರು ಮೀನುಗಾರಿಕಾ ಬೋಟ್‌ಗಳಲ್ಲಿದ್ದ ಮೀನುಗಾರರು ಗಮನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಬೋಟ್‌ನಲ್ಲಿದ್ದ ಎಲ್ಲ 24 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
