ವಾಷಿಂಗ್ಟನ್: ರಷ್ಯಾದ ನಿರಂತರ ವಾಯುದಾಳಿಗಳನ್ನು ಎದುರಿಸಲು ಉಕ್ರೇನ್ನ ವಾಯು ಮತ್ತು ಕ್ಷಿಪಣಿ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ 500 ಪ್ಯಾಟ್ರಿಯಾಟ್ PAC-3 MSE ಕ್ಷಿಪಣಿಗಳ ಮಾರಾಟಕ್ಕೆ ಅಮೆರಿಕ ಅನುಮೋದನೆ ನೀಡಿದೆ. ಈ ಪ್ರಸ್ತಾವಿತ ರಕ್ಷಣಾ ಒಪ್ಪಂದದ ಮೌಲ್ಯ 2.1 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಅಮೆರಿಕದ ವಿದೇಶಾಂಗ ಇಲಾಖೆ ಮಾರಾಟಕ್ಕೆ ಅನುಮೋದನೆ ನೀಡಿದ್ದು, ಈ ಕುರಿತು ಕಾಂಗ್ರೆಸ್ಗೆ ಮಾಹಿತಿ ರವಾನಿಸಿದೆ. ಕ್ಷಿಪಣಿಗಳ ಜೊತೆಗೆ ಬಿಡಿಭಾಗಗಳು, ತಾಂತ್ರಿಕ ನೆರವು ಮತ್ತು ನಿರ್ವಹಣಾ ಸೇವೆಗಳೂ ಪ್ಯಾಕೇಜ್ನಲ್ಲಿ ಸೇರಿವೆ.

ಈ ಖರೀದಿಗೆ ಕೆನಡಾ, ಜರ್ಮನಿ ಮತ್ತು ನಾರ್ವೆ ದೇಶಗಳು ನೆರವು ನೀಡಲಿವೆ. ಯುರೋಪಿಯನ್ ಒಕ್ಕೂಟದ ಉಕ್ರೇನ್ ಬೆಂಬಲ ಸಾಲದ ಮೂಲಕವೂ ಹಣಕಾಸು ಒದಗಿಸಲಾಗುತ್ತದೆ. ಈ ಒಪ್ಪಂದಕ್ಕೆ ಅಮೆರಿಕದ ಯಾವುದೇ ಹಣ ಬಳಕೆಯಾಗುವುದಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ರಷ್ಯಾದ ವಾಯುದಾಳಿಗಳನ್ನು ತಡೆಯಲು ಉಕ್ರೇನ್ನ ಪ್ಯಾಟ್ರಿಯಾಟ್ ರಕ್ಷಣಾ ವ್ಯವಸ್ಥೆಗೆ ಈ ಕ್ಷಿಪಣಿಗಳು ಬಲ ನೀಡಲಿವೆ ಎಂದು ನಿರೀಕ್ಷಿಸಲಾಗಿದೆ. ಈ ಮಾರಾಟದಿಂದ ಅಮೆರಿಕದ ರಕ್ಷಣಾ ಸಿದ್ಧತೆಗೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.
