ವಾಷಿಂಗ್ಟನ್: ಅಮೆರಿಕಕ್ಕೆ ಬಂದಿರುವ ಬೆದರಿಕೆಗಳ ಹಿಂದೆ ಇರಾನ್‌ನ ಕೈವಾಡವಿದೆ ಎಂಬುದು ಸಾಬೀತಾದರೆ ಟೆಹ್ರಾನ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಇದೇ ವೇಳೆ, ಹೌತಿ ದಾಳಿಗಳನ್ನು ಎದುರಿಸುತ್ತಿರುವ ಸೌದಿ ಅರೇಬಿಯಾಕ್ಕೆ ಅಮೆರಿಕ ತನ್ನ ರಕ್ಷಣಾ ಮತ್ತು ಭದ್ರತಾ ಬದ್ಧತೆಗಳನ್ನು ಗೌರವಿಸಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
ಹೌತಿಗಳು ಸೌದಿ ಮೇಲೆ ದಾಳಿ ನಡೆಸಿದ್ದು, ಆತ್ಮರಕ್ಷಣೆಯ ಹಕ್ಕು ಸೌದಿಗಿದೆ ಎಂದು ರುಬಿಯೊ ತಿಳಿಸಿದ್ದಾರೆ. ಆದರೆ ವಾಷಿಂಗ್ಟನ್ ವಾಯು ಬೆಂಬಲ ನೀಡಲಿದೆಯೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಇನ್ನೊಂದೆಡೆ, ಅಮೆರಿಕ, ಕೆನಡಾ ಸೇರಿದಂತೆ 10 ದೇಶಗಳು ಇರಾನ್ ಮತ್ತು ಅದರ ಪ್ರತಿನಿಧಿಗಳು ಪಶ್ಚಿಮ ಗೋಳಾರ್ಧದಲ್ಲಿ ಭಯೋತ್ಪಾದಕ ಹಾಗೂ ಇತರ ‘ದುರುದ್ದೇಶಪೂರಿತ’ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಆರೋಪಿಸಿವೆ.
ಮಾರಕ ಪಿತೂರಿ, ಅಕ್ರಮ ನಿಧಿಸಂಗ್ರಹಣೆ, ರಾಜಕೀಯ ಹಸ್ತಕ್ಷೇಪ ಮತ್ತು ವಿದೇಶಿ ಪ್ರಭಾವ ಕಾರ್ಯಾಚರಣೆಗಳು ಇರಾನ್‌ಗೆ ಸಂಬಂಧಿಸಿವೆ ಎಂದು ದೇಶಗಳು ಆರೋಪಿಸಿವೆ. ಇಂತಹ ಚಟುವಟಿಕೆಗಳನ್ನು ಎದುರಿಸಲು ಸಮನ್ವಯ ಹೆಚ್ಚಿಸುವುದಾಗಿ ಅವು ಘೋಷಿಸಿವೆ.
