ನವದೆಹಲಿ: ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ದ್ವಂದ್ವ ನಿಲುವು ಹೊಂದಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಆರೋಪಿಸಿದ್ದಾರೆ. ಬಾಬ್ರಿ ಕಟ್ಟಡ ಧ್ವಂಸ ಮತ್ತು ಇತರ ರಾಷ್ಟ್ರೀಯ ವಿಷಯಗಳ ಕುರಿತು ಕಾಂಗ್ರೆಸ್ ನಾಯಕತ್ವದ ಪ್ರತಿಕ್ರಿಯೆಗಳನ್ನು ಅವರು ಪ್ರಶ್ನಿಸಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ತ್ರಿವೇದಿ, 1992ರ ಡಿಸೆಂಬರ್ 6ರಂದು ಬಾಬ್ರಿ ಕಟ್ಟಡ ಧ್ವಂಸಗೊಂಡಾಗ ಸೋನಿಯಾ ಗಾಂಧಿ ಭಾವುಕರಾಗಿದ್ದರು ಎಂಬ ವರದಿಗಳನ್ನು ಉಲ್ಲೇಖಿಸಿದರು. ಆದರೆ ಕಾಶ್ಮೀರಿ ಹಿಂದೂಗಳ ವಲಸೆ ಹಾಗೂ ಸಂಸತ್ ದಾಳಿ ಪ್ರಕರಣದ ಅಪರಾಧಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಇದೇ ರೀತಿಯ ಕಾಳಜಿ ತೋರಿಸಿರಲಿಲ್ಲವೇಕೆ ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿ ವಿವಾದಿತ ಕಟ್ಟಡವನ್ನು ‘ಬಾಬ್ರಿ ಮಸೀದಿ’ ಎಂದು ಉಲ್ಲೇಖಿಸಿರುವ ವರದಿಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅವರು, ಅಂದು ದೂರದರ್ಶನದಲ್ಲಿ ಇಡೀ ದಿನ ನೇರ ಪ್ರಸಾರ ಇರದಿದ್ದಾಗ ಅವರು ಘಟನೆಯನ್ನು ಹೇಗೆ ವೀಕ್ಷಿಸಿದರು ಎಂದು ಪ್ರಶ್ನಿಸಿದರು.

ಮಹಾತ್ಮ ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆಯಿಂದ ಕಾಂಗ್ರೆಸ್ ದೂರ ಸರಿದಿದೆ ಎಂದು ಆರೋಪಿಸಿದ ತ್ರಿವೇದಿ, ನೆಹರು-ಗಾಂಧಿ ಕುಟುಂಬದ ಸದಸ್ಯರು ಬಾಬರ್ ಸಮಾಧಿಗೆ ಭೇಟಿ ನೀಡಿದ್ದನ್ನೂ ಪ್ರಸ್ತಾಪಿಸಿದರು.
ಸಮಾಜವಾದಿ ಪಕ್ಷದ ರಾಮಮಂದಿರ ಭೇಟಿ ಕುರಿತ ಆಸಕ್ತಿಯನ್ನೂ ಪ್ರಶ್ನಿಸಿದ ಅವರು, ಅದು ಚುನಾವಣಾ ಲಾಭದ ಉದ್ದೇಶದ ಹೇಳಿಕೆ ಎಂದು ಆರೋಪಿಸಿದರು. ಉತ್ತರಾಖಂಡ ಕಾಂಗ್ರೆಸ್ ನಾಯಕ ಹರಕ್ ಸಿಂಗ್ ರಾವತ್ ವಿರುದ್ಧ ಕೇಳಿಬಂದಿರುವ ಆರೋಪಗಳು ಹಾಗೂ ಡಿಎನ್ಎ ಪರೀಕ್ಷೆ, ಸಿಬಿಐ ತನಿಖೆಯ ಬೇಡಿಕೆಗಳನ್ನೂ ಪ್ರಸ್ತಾಪಿಸಿದರು. ಸೋನಿಯಾ ಮತ್ತು ಪ್ರಿಯಾಂಕಾ ಗಾಂಧಿ ಈ ವಿಷಯಗಳ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
