ಭಾರತದಲ್ಲಿ ಬಾಂಗ್ಲಾದೇಶ ಮಾದರಿ ಸರ್ಕಾರ ಬದಲಾವಣೆಗೆ ಕಾಂಗ್ರೆಸ್ ಯತ್ನ: ರಾಜನಾಥ್ ಸಿಂಗ್ ಆರೋಪ

ನವದೆಹಲಿ: ಭಾರತದಲ್ಲಿ ಬಾಂಗ್ಲಾದೇಶದ ಮಾದರಿಯಲ್ಲಿ ಸರ್ಕಾರ ಬದಲಾವಣೆ ತರಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಆರೋಪಿಸಿದ್ದಾರೆ. ಯುವಜನರ ಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸುವ ಬದಲು, ದೇಶದಲ್ಲಿ ಅಶಾಂತಿ ಸೃಷ್ಟಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅಶಾಂತಿ ಸೃಷ್ಟಿಸಲು ಅಥವಾ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ಬಳಸಬಾರದು ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಅದರ ರಾಜಕೀಯ ಮಿತ್ರಪಕ್ಷಗಳು ಯುವಜನರ ಶಕ್ತಿಯನ್ನು ರಚನಾತ್ಮಕ ಕಾರ್ಯಗಳಿಗೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಬಳಸುವ ಬದಲು ರಾಜಕೀಯ ಸಂಘರ್ಷವನ್ನು ತೀವ್ರಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಸಿಂಗ್ ಆರೋಪಿಸಿದರು. ಯುವಜನರನ್ನು ಅರಾಜಕತೆಯ ರಾಜಕೀಯದಲ್ಲಿ ದಾಳಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದೂ ದೂರಿದರು.

ಬಾಂಗ್ಲಾದೇಶದ ವಿದ್ಯಮಾನ ಉಲ್ಲೇಖ

2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಮತ್ತು ಅಂದಿನ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಯನ್ನು ಉಲ್ಲೇಖಿಸಿದ ರಾಜನಾಥ್ ಸಿಂಗ್, ಭಾರತದಲ್ಲಿಯೂ ಸರ್ಕಾರ ಬದಲಾವಣೆ ತರಲು ಬಾಂಗ್ಲಾದೇಶದಿಂದ ಸ್ಫೂರ್ತಿ ಪಡೆಯುವ ಕುರಿತು ವಿರೋಧ ಪಕ್ಷದ ನಾಯಕರು ಬಹಿರಂಗವಾಗಿ ಮಾತನಾಡಿದ್ದಾರೆ ಎಂದು ಹೇಳಿದರು.

ಸರ್ಕಾರ ಬದಲಾವಣೆಗಾಗಿ ಬಾಂಗ್ಲಾದೇಶದ ಮಾದರಿಯನ್ನು ಅನುಸರಿಸುವ ಬಗ್ಗೆ ಕೆಲವರು ಮಾತನಾಡುತ್ತಿದ್ದರೆ, ಇನ್ನು ಕೆಲವರು ಸರ್ಕಾರವನ್ನು ಉರುಳಿಸುವುದಾಗಿ ಹೇಳುತ್ತಿದ್ದಾರೆ. ಇಂತಹ ಹೇಳಿಕೆಗಳು ವಿರೋಧ ಪಕ್ಷಗಳ ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ವಿರೋಧ ಪಕ್ಷಗಳು ಬಳಸುತ್ತಿರುವ ‘ಆಡಳಿತ ಬದಲಾವಣೆ’ (Regime Change) ಎಂಬ ಪದಪ್ರಯೋಗವನ್ನು ಉಲ್ಲೇಖಿಸಿದ ಸಿಂಗ್, ಅವರ ಪ್ರತಿಭಟನೆಗಳು ಕೇವಲ ಚುನಾವಣಾ ಸುಧಾರಣೆ ಅಥವಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಾದ ಆಕ್ಷೇಪಗಳಿಗೆ ಸೀಮಿತವಾಗಿಲ್ಲ ಎಂದು ಆರೋಪಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ಪ್ರಜಾಸತ್ತಾತ್ಮಕ ಹಕ್ಕುಗಳ ದುರುಪಯೋಗ ಬೇಡ

ಗುರುವಾರ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಉಲ್ಲೇಖಿಸಿದ ರಕ್ಷಣಾ ಸಚಿವರು, ಪ್ರಜಾಸತ್ತಾತ್ಮಕ ಹಕ್ಕುಗಳ ಹೆಸರಿನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವುದು, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಅಥವಾ ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುವುದನ್ನು ಸಮರ್ಥಿಸಲಾಗದು ಎಂದು ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕಾನೂನನ್ನು ಗೌರವಿಸುವುದು ಅತ್ಯಗತ್ಯ. ರಾಜಕೀಯ ಸ್ವಾರ್ಥಕ್ಕಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಿಕೊಡಲು ಸಾಧ್ಯವಿಲ್ಲ. ಇಂತಹ ಪ್ರಯತ್ನಗಳು ಭಾರತದ ಪ್ರಗತಿಯನ್ನು ತಡೆಯಲಾರವು ಎಂದು ಅವರು ಪ್ರತಿಪಾದಿಸಿದರು.

ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೆಸರಿನಲ್ಲಿ ‘ವಿನಾಶಕಾರಿ ರಾಜಕೀಯ’ ನಡೆಸುವ ಬದಲು, ಜನರ ತೀರ್ಪನ್ನು ಗೌರವಿಸಬೇಕು ಮತ್ತು ತಮ್ಮ ರಾಜಕೀಯ ನಿಲುವಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.