ಬೆಂಗಳೂರು: ರಾಜ್ಯದಲ್ಲಿ ಮಾದಕ ದ್ರವ್ಯಗಳ ದಂಧೆ ವ್ಯಾಪಕವಾಗಿದ್ದು, ಇದೀಗ ವಿದ್ಯಾರ್ಥಿಗಳನ್ನೇ ಡ್ರಗ್ ಪೆಡ್ಲರ್‌ಗಳನ್ನಾಗಿ ಮಾಡುವ ಜಾಲ ಸಕ್ರಿಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಹಿಂದೆ ಡ್ರಗ್ ಪೆಡ್ಲರ್‌ಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಈಗ ವಿದ್ಯಾರ್ಥಿಗಳನ್ನೇ ಈ ದಂಧೆಗೆ ಬಳಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿರುವ ಸಿ.ಟಿ. ರವಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡ್ರಗ್ಸ್ ಮಾರಾಟ ಆರು ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಸರ್ಕಾರದ ಮೂರು ವರ್ಷಗಳ ಸಾಧನೆ ಕುರಿತು ಜಾಹೀರಾತು ನೀಡುವಾಗ ‘ಉಡ್ತಾ ಕರ್ನಾಟಕ’ದ ಸಾಧನೆಯನ್ನು ಏಕೆ ಉಲ್ಲೇಖಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಡ್ರಗ್ಸ್ ಜಾಲದ ಹಿಂದೆ ಆಡಳಿತ ವರ್ಗದ ಕಾಣದ ಕೈ ಇದೆಯೇ?’
ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಡ್ರಗ್ ಪೆಡ್ಲರ್‌ಗಳಾಗಿ ಬಳಸಿಕೊಳ್ಳಲಾಗುತ್ತಿರುವಾಗ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲವೇ ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
“ಪೊಲೀಸ್ ಇಲಾಖೆ ಹಲ್ಲು ಕಿತ್ತ ಹಾವಿನಂತಾಗಿದೆಯೇ? ಅಥವಾ ಮಾದಕ ದಂಧೆಯ ಹಿಂದೆ ಆಡಳಿತ ವರ್ಗದ ಕಾಣದ ಕೈ ಇದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಯುವಜನರನ್ನು ಮಾದಕ ವ್ಯಸನದತ್ತ ತಳ್ಳುತ್ತಿರುವ ಸರ್ಕಾರ ರಾಜ್ಯದ ಯುವಕರ ಪಾಲಿಗೆ ಮಾರಕವಾಗಿದೆ ಎಂದು ಆರೋಪಿಸಿರುವ ಅವರು, ಸರ್ಕಾರಕ್ಕೆ ಕೊಂಚವಾದರೂ ಜವಾಬ್ದಾರಿ ಇದ್ದರೆ ತಕ್ಷಣ ವಿಶೇಷ ಪಡೆ ರಚಿಸಿ ಮಾದಕ ದ್ರವ್ಯ ಜಾಲವನ್ನು ಸಂಪೂರ್ಣವಾಗಿ ನಿಗ್ರಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ಗೃಹ ಸಚಿವರು ರಾಜೀನಾಮೆ ನೀಡಿ ಮನೆಯಲ್ಲೇ ಕುಳಿತು ಟ್ವೀಟ್ ಮಾಡಲಿ ಎಂದು ಸಿ.ಟಿ. ರವಿ ಟೀಕಿಸಿದ್ದಾರೆ.
ಗೃಹ ಸಚಿವರು ನಿದ್ದೆಯಲ್ಲಿದ್ದಾರೆ – ರಾಜ್ಯ ಮಾದಕ ದ್ರವ್ಯದ ಗೂಡಾಗಿದೆ!
ರಾಜ್ಯದಲ್ಲಿ ಮೊದಲು ಡ್ರಗ್ ಪೆಡ್ಲರ್‌ಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿ, ಮಾದಕ ದ್ರವ್ಯಗಳ ಮಾರಾಟ ಮಾಡುತ್ತಿದ್ದರು. ಆದರೆ ಇಂದು ವಿದ್ಯಾರ್ಥಿಗಳನ್ನೇ ಡ್ರಗ್ ಪೆಡ್ಲರ್‌ಗಳನ್ನಾಗಿ ಮಾಡುವ ದಂಧೆ ರಾಜ್ಯದಲ್ಲಿ ಸಕ್ರಿಯವಾಗಿದೆ.
ಜಗತ್ತಿನ ಬೇರೆಲ್ಲ ವಿಚಾರಗಳೂ ತನಗೆ… pic.twitter.com/SiYPCuNDRE
— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) September 1, 2026
