ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ BSWML ಟೆಂಡರ್ ಪ್ರಕ್ರಿಯೆ ನಡೆಸಿತೇ? ನಿಯಮಗಳನ್ನು ಲೆಕ್ಕಿಸದೆ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆಯೇ? ಇಂತಹ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ವಿರುದ್ಧ ಸಿಟಿಜನ್ ರೈಟ್ಸ್ ಫೌಂಡೇಶನ್ (CRF) ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
- ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಟೆಂಡರ್ ಪ್ರಕ್ರಿಯೆ ಆರೋಪ
- ಐದು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖ
- ನೀತಿ ಸಂಹಿತೆ ಅವಧಿಯಲ್ಲಿ ತಾಂತ್ರಿಕ ಅರ್ಹತೆ ಪರಿಶೀಲನೆ, ಆರ್ಥಿಕ ಬಿಡ್ ಆರೋಪ
- BSWML ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆಗೆ CRF ಆಗ್ರಹ
ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಸಂದರ್ಭದಲ್ಲಿ ಜಾರಿಯಲ್ಲಿದ್ದ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಟೆಂಡರ್ ಪ್ರಕ್ರಿಯೆ ಮುಂದುವರಿಸಲಾಗಿದೆ ಹಾಗೂ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂಬುದು ಫೌಂಡೇಶನ್ನ ಆರೋಪವಾಗಿದೆ.
CRF ಅಧ್ಯಕ್ಷ ಕೆ.ಎ. ಪಾಲ್ ಅವರು ನವೆಂಬರ್ 6ರಂದು ದೂರು ಸಲ್ಲಿಸಿ, ಪ್ರಕರಣದ ಕುರಿತು ಉನ್ನತ ಮಟ್ಟದ ಸ್ವತಂತ್ರ ಹಾಗೂ ಕಾಲಮಿತಿಯ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
2026ರ ಸೆಪ್ಟೆಂಬರ್ 22ರಂದು ನೀತಿ ಸಂಹಿತೆ ಜಾರಿಯಾದ ಬಳಿಕವೂ ಟೆಂಡರ್ ಪ್ರಕ್ರಿಯೆಗಳು ನಡೆದಿವೆ. 2025ರ ಜುಲೈ 30ರಂದು ಪ್ರಕಟಿಸಿದ್ದ ಟೆಂಡರ್ಗೆ ಸಂಬಂಧಿಸಿದ ಐದು ಪ್ಯಾಕೇಜ್ಗಳ ಕಾಮಗಾರಿಗಳಿಗೆ ಸೆಪ್ಟೆಂಬರ್ 23ರಂದು ಕಾರ್ಯಾದೇಶ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಸೆಪ್ಟೆಂಬರ್ 19ರಂದು ಆರು ಪ್ಯಾಕೇಜ್ಗಳಿಗೆ ಟೆಂಡರ್ ಪ್ರಕಟಿಸಿ, ನೀತಿ ಸಂಹಿತೆ ಅವಧಿಯಲ್ಲೇ ತಾಂತ್ರಿಕ ಅರ್ಹತೆ ಪರಿಶೀಲನೆ ಹಾಗೂ ಆರ್ಥಿಕ ಬಿಡ್ಗಳನ್ನು ತೆರೆಯಲಾಗಿದೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 23ರಂದು ನಾಲ್ಕು ಮತ್ತು ಅಕ್ಟೋಬರ್ 8ರಂದು ಮತ್ತೆ ಮೂರು ಪ್ಯಾಕೇಜ್ಗಳಿಗೆ ಹೊಸ ಟೆಂಡರ್ ಪ್ರಕಟಿಸಿರುವುದನ್ನೂ ಪ್ರಶ್ನಿಸಲಾಗಿದೆ.
BSWML ಅಧಿಕಾರಿಗಳಾದ ಉಪ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್, ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ರಾಜೇಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸುವಂತೆ CRF ಆಗ್ರಹಿಸಿದೆ.
ಟೆಂಡರ್ಗಳಲ್ಲಿ ಪಕ್ಷಪಾತ, ಬಿಡ್ಗಳ ಹೊಂದಾಣಿಕೆ, ಹಿತಾಸಕ್ತಿ ಸಂಘರ್ಷ ಅಥವಾ ಅಧಿಕಾರ ದುರುಪಯೋಗ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು. ದಾಖಲೆಗಳನ್ನು ಸಂರಕ್ಷಿಸಿ, ನಿಯಮ ಉಲ್ಲಂಘನೆ ಸಾಬೀತಾದರೆ ಟೆಂಡರ್ ರದ್ದುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
