‘ಮತ ಉಳಿಸಿ–ದೇಶ ಉಳಿಸಿ’; AICC ಹೋರಾಟ ಯಶಸ್ವಿಗೊಳಿಸಲು ಕೆಪಿಸಿಸಿ ಕಾರ್ಯತಂತ್ರ

ಶಿವಮೊಗ್ಗ: ಕ್ರಾಂತಿಕಾರಿ ಹೋರಾಟಗಳು ಹಾಗೂ ಸಮಾಜವಾದಿ ಚಿಂತನೆಗಳ ಪರಂಪರೆ ಹೊಂದಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವುದೇ ನಮ್ಮ ಸಂಕಲ್ಪ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಶನಿವಾರ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿರುವ ಶಿವಮೊಗ್ಗ ಜಿಲ್ಲೆ ಕ್ರಾಂತಿಕಾರಿ ಮತ್ತು ಸಮಾಜವಾದಿ ಚಿಂತನೆಗಳಿಗೆ ಹೆಸರುವಾಸಿಯಾಗಿದೆ. ಆದರೆ, ಸಮಾಜವಾದಿ ವಿಚಾರಧಾರೆಗೆ ಭದ್ರ ನೆಲೆಯಾಗಿದ್ದ ಜಿಲ್ಲೆ ಇಂದು ಕೋಮುವಾದದತ್ತ ವಾಲುತ್ತಿರುವುದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನಾತ್ಮಕವಾಗಿ ಬಲಿಷ್ಠವಾಗಿದ್ದು, ಈ ಶಕ್ತಿಯನ್ನು ಸೈದ್ಧಾಂತಿಕವಾಗಿಯೂ ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಕೋಮುವಾದಿ ರಾಜಕಾರಣವನ್ನು ಎದುರಿಸಲು ಕಾರ್ಯಕರ್ತರು ತಳಮಟ್ಟದಲ್ಲಿ ಸಕ್ರಿಯರಾಗಬೇಕು. ಶಿಕಾರಿಪುರದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸ್ಮರಣಾರ್ಥ ಆಯೋಜಿಸಿದ್ದ ‘ಜನತಾ ಜೋಡೋ’ ಕಾರ್ಯಕ್ರಮದ ಯಶಸ್ಸು ಜಿಲ್ಲೆಯ ಕಾಂಗ್ರೆಸ್ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ತೀರ್ಮಾನದಂತೆ ಜಿಲ್ಲೆಯಲ್ಲಿ ‘ಮತ ಉಳಿಸಿ–ದೇಶ ಉಳಿಸಿ’ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಮತದಾನದ ಹಕ್ಕು, ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ಹರಿಪ್ರಸಾದ್ ಕರೆ ನೀಡಿದರು.