VB-G RAM G ಕಾಯ್ದೆ ಅರಿವು ಅಭಿಯಾನ; 1,338 ಪಂಚ ಸಮ್ಮೇಳನಗಳಲ್ಲಿ 5.26 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ

ನವದೆಹಲಿ: ವಿಕ್ಷಿತ್ ಭಾರತ್–ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕಾ ಮಿಷನ್ (ಗ್ರಾಮೀಣ)–VB-G RAM G ಕಾಯ್ದೆ, 2025ರ ಕುರಿತು ದೇಶಾದ್ಯಂತ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದುವರೆಗೆ 1,338 ಜಿಲ್ಲಾ ಮಟ್ಟದ ಪಂಚ ಸಮ್ಮೇಳನಗಳನ್ನು ಆಯೋಜಿಸಲಾಗಿದ್ದು, 5.26 ಲಕ್ಷಕ್ಕೂ ಹೆಚ್ಚು ಪಂಚಾಯತ್ ರಾಜ್ ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.

ಪಂಚಾಯತಿ ರಾಜ್ ಸಂಸ್ಥೆಗಳ (PRI) ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕರ್ತರಿಗೆ ಕಾಯ್ದೆಯ ಪ್ರಮುಖ ಅಂಶಗಳು ಹಾಗೂ ಅದರ ಅನುಷ್ಠಾನದಲ್ಲಿ ಅವರ ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಅಭಿಯಾನ ಕೈಗೊಳ್ಳಲಾಗಿದೆ.

23 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮ್ಮೇಳನ ಪೂರ್ಣ

ದೇಶಾದ್ಯಂತ ಈವರೆಗೆ 1,338 ಪಂಚ ಸಮ್ಮೇಳನಗಳು ನಡೆದಿದ್ದು, 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ನಿಗದಿತ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿವೆ. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರಾಖಂಡ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಭಿಯಾನದಲ್ಲಿ ಭಾಗವಹಿಸಿವೆ.

ಗುಜರಾತ್, ಜಮ್ಮು ಮತ್ತು ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳಗಳು ಜಿಲ್ಲಾ ಮಟ್ಟವನ್ನು ಮೀರಿ ಹೆಚ್ಚುವರಿ ಸಮ್ಮೇಳನಗಳನ್ನು ಆಯೋಜಿಸಿ ಹೆಚ್ಚಿನ ಸಂಖ್ಯೆಯ ಪಂಚಾಯತ್ ರಾಜ್ ಪ್ರತಿನಿಧಿಗಳು ಮತ್ತು ಕಾರ್ಯಕರ್ತರನ್ನು ತಲುಪಿವೆ.

VB-G RAM G ಕಾಯ್ದೆಯಡಿ ಗ್ರಾಮ ಪಂಚಾಯತ್‌ಗಳನ್ನು ಗ್ರಾಮೀಣಾಭಿವೃದ್ಧಿಯ ಪ್ರಮುಖ ಕೇಂದ್ರಗಳಾಗಿ ಪರಿಗಣಿಸಲಾಗಿದ್ದು, ಯೋಜನೆ ರೂಪಿಸುವಿಕೆ, ಅನುಷ್ಠಾನ, ಮೇಲ್ವಿಚಾರಣೆ, ಪಾರದರ್ಶಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯಲ್ಲಿ ಅವುಗಳಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ.

ಪಂಚ ಸಮ್ಮೇಳನಗಳಲ್ಲಿ ವಿಕ್ಷಿತ್ ಗ್ರಾಮ ಪಂಚಾಯತ್ ಯೋಜನೆ (VGPP), ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್, ಆಸ್ತಿ ಸೃಷ್ಟಿ, ವಿವಿಧ ಯೋಜನೆಗಳ ಒಮ್ಮುಖ, ಸಾಮಾಜಿಕ ಲೆಕ್ಕಪರಿಶೋಧನೆ ಹಾಗೂ ಕುಂದುಕೊರತೆ ಪರಿಹಾರ ಸೇರಿದಂತೆ ಕಾಯ್ದೆಯ ಪ್ರಮುಖ ನಿಬಂಧನೆಗಳ ಕುರಿತು ಮಾಹಿತಿ ನೀಡಲಾಗಿದೆ.

ವ್ಯಾಪಕ ಭಾಗವಹಿಸುವಿಕೆಯಿಂದ ತಳಮಟ್ಟದ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ, ಯೋಜನಾ ರೂಪಿಸುವಿಕೆ ಹಾಗೂ ಕಾಯ್ದೆಯ ಅನುಷ್ಠಾನದ ಕುರಿತು ಜಾಗೃತಿ ಹೆಚ್ಚಿದ್ದು, ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣಕ್ಕೆ ಇದು ಬಲವಾದ ಅಡಿಪಾಯ ಒದಗಿಸಿದೆ ಎಂದು ಸಚಿವಾಲಯ ತಿಳಿಸಿದೆ.